Wednesday, February 4, 2009

’ಸುಲಭದ ಕಟ್ಟ’ದ ರೂವಾರಿಗಳಿಗೆ ಅಂಗೀಕಾರ











ನೀರಾವರಿಗೆ ನೀರಿಗಾಗಿ ರೈತರು ಹೊಳೆ-ತೋಡುಗಳಿಗೆ ಅಡ್ಡವಾಗಿ ಕಟ್ಟುವ ಒಡ್ಡಿಗೆ ಕಾಸರಗೋಡು-ದ.ಕ ಭಾಗದಲ್ಲಿ ಕಟ್ಟ ಎಂದು ಹೆಸರು. ಈ ರಚನೆ ತಾತ್ಕಾಲಿಕ. ಪ್ರತಿವರ್ಷ ಮತ್ತೆಮತ್ತೆ ಕಟ್ಟಬೇಕು.

ಸಾಂಪ್ರದಾಯಿಕ ಕಟ್ಟಕ್ಕೆ ಕಲ್ಲು-ಮಣ್ಣು, ಮರದ ಗೆಲ್ಲು, ಸೊಪ್ಪು ಇತ್ಯಾದಿ ಬಳಸುತ್ತಿದ್ದರು. ಮರಳಚೀಲ ಬಳಸಿ ಕಟ್ಟುವ ಕಟ್ಟ ಇದಕ್ಕಿಂತ ಶ್ರಮದ ದೃಷ್ಟಿಯಲ್ಲಿ ಹಗುರ. ಪ್ರತಿ ವರ್ಷ ದೊಡ್ಡ ಪ್ರಮಾಣದ ಮಣ್ಣು ತರುವುದು ಇನ್ನೊಂದು ತಲೆನೋವು. ವಾರಣಾಶಿಯ ಡಾ. ಕೃಷ್ಣಮೂರ್ತಿ ಮಣ್ಣಿಗೆ ಬದಲು ಸಿಲ್ಪಾಲಿನ್ ಹಾಳೆ ಬಳಸಿ ಈ ಕೆಲಸವನ್ನು ಇನ್ನಷ್ಟು ಹಗುರವಾಗಿಸಿದರು. ಈ ಮಾದರಿಗೆ ವಾರಣಾಶಿ ವಿಧಾನ ಎಂದೇ ಹೆಸರಿಟ್ಟರು.

ಚೀಲಕ್ಕೆ ಮರಳು ತುಂಬಲು, ಪೇರಿಸಿಡಲು ತುಂಬ ಕಾರ್ಮಿಕರು ಬೇಕು. ಇದಕ್ಕೆ ಬದಲು ಆಳದ ಮರಳಿನ ತಳ ಇರುವಲ್ಲಿ ಪೋಕ್‍ಲೈನ್ (ಜೇಸೀಬಿ) ಬಳಸಿ ಮರಳನ್ನು ಪೇರಿಸಿ ಅದರ ಒಳಮೈಗೆ ಅಗ್ಗದ ಪ್ಲಾಸ್ಟಿಕ್ ಹಾಳೆ ಹೊದೆಸಿದರೆ ಸಾಲದೇ? ದರ್ಬೆಯ ವಸಂತಕುಮಾರ್ ಈ ಪ್ರಯೋಗ ಮಾಡಿ ನೋಡಿದರು. ಸಕ್ಸೆಸ್! ಕಾರ್ಮಿಕರ ಕೊರತೆಯ ಈ ದಿನಗಳಲ್ಲಿ ಈ ಅನುಶೋಧನೆ ನಿಜಕ್ಕೂ ಮೆಚ್ಚಿಕೊಳ್ಳಬೇಕಾದದ್ದು.

ಬರೇ ಮರಳಿಗೆ ಪ್ಲಾಸ್ಟಿಕ್ ಬನಿಯನ್ ತೊಡಿಸಿದ ಈ ಹೊಸ ರೀತಿಯ ಕಟ್ಟ ಈ ವರೆಗೆ ಎಂಟು-ಹತ್ತು ರಚನೆ ಆಗಿದೆ. ‘ಬೇಕೆಂದರೆ ನೇತ್ರಾವತಿ ನದಿಗೂ ಇಂಥ ಅಗ್ಗದ ಕಟ್ಟ ಕಟ್ಟಿ ಮಂಗಳೂರಿಗೆ ನೀರು ಒಯ್ಯಬಹುದು; ಒಂದು ಸಿಮೆಂಟ್ ಅಣೆಕಟ್ಟು ಕಟ್ಟುವುದಕ್ಕೆ ಬದಲು ಇಂಥವು ಹತ್ತಿಪ್ಪತ್ತು - ನೂರಾರು ಕಟ್ಟಲು ಸಾಧ್ಯ’ ಎನ್ನುತ್ತಾರೆ ಡಾ.ವಾರಣಾಶಿ ಕೃಷ್ಣಮೂರ್ತಿ ಮತ್ತು ದರ್ಬೆ ವಸಂತಕುಮಾರ್.

ಈ ಇಬ್ಬರು ಗ್ರಾಮೀಣ ಅನುಶೋಧಕರಿಗೆ ಜನವರಿ ಐದರಂದು ಮಂಡ್ಯದ ಯುವದನಿ ಸೇವಾ ಪ್ರತಿಷ್ಠಾನ ಮತ್ತು ಮಂಡ್ಯ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಪ್ರಶಸ್ತಿ ಪ್ರದಾನ ಮಾಡಲಿವೆ.

(ಈ ಕಟ್ಟದ ಬಗ್ಗೆ ಹೆಚ್ಚಿನ ಮಾಹಿತಿಗೆ : ಕಟ್ಟಗಳು, ಅನುಶೋಧನೆಗಳು ಮತ್ತು ವಾರಣಾಶಿ ಮಾದರಿ - ಸಂ: ಶ್ರೀ ಪಡ್ರೆ; ಡಾ.ವಾರಣಾಶಿ ಕೃಷ್ಣಮೂರ್ತಿ. ಪ್ರತಿಗಳಿಗೆ : ವಾರಣಾಶಿ ಸಂಶೋಧನಾ ಪ್ರತಿಷ್ಠಾನ, ಅಂಚೆ: ಅಡ್ಯನಡ್ಕ , ೫೭೪ ೨೬೦ (ದ.ಕ.), ದೂರವಾಣಿ : ೦೮೨೫೫ - ೨೭೦ ೨೫೪, info@varanashi.com)

Monday, February 2, 2009

ರೈಲು ಹಳಿಗಳ ಮೇಲೆ ಜಾಗೃತಿ ಯಾತ್ರೆ







೨೦೦೮ ದಶಂಬರ ಕೊನೆಯ ವಾರ.ಸಂಪನ್ಮೂಲ ವ್ಯಕ್ತಿಯಾಗಿ ಬರಬೇಕು ಎಂಬ ಮಿಂಚಂಚೆ ಬರುವ ವರೆಗೆ ನನಗೆ ಈ ಟಾಟಾ ಜಾಗೃತಿ ಯಾತ್ರೆಯ ಬಗ್ಗೆ ಇನಿತೂ ಗೊತ್ತಿರಲಿಲ್ಲ. ದೇಶದಾದ್ಯಂತದ ೧೮ರಿಂದ ೨೫ರೊಳಗೆ ವಯಸ್ಸಿನ ವಿದ್ಯಾರ್ಥಿ - ವಿದ್ಯಾರ್ಥಿನಿಯರನ್ನು ಆಯ್ದು ರೈಲಿನಲ್ಲಿ ದೇಶ ಸುತ್ತಾಡಿಸಿ ಒಂದಷ್ಟು ಸಾಧಕರ ಭೇಟಿ, ಮಾತುಕತೆ ಮೂಲಕ ಕಲಿಕೆ. ಹದಿನೈದು ದಿನಗಳ ಗಾಲಿಯ ಮೇಲಿನ ದೇಶದರ್ಶನ.

ರೈಲು ಹೋಗುತ್ತಿದ್ದಂತೆಯೇ ಆಚೆ, ಈಚೆಯ ಎರಡು ಬೋಗಿಗಳ ಜನರಿಗೆ ಮಳೆಕೊಯ್ಲಿನ ಬಗ್ಗೆ ಸ್ಲೈಡ್ ಶೋ. ಪ್ಲಾಸ್ಮಾ ಸ್ಕ್ರೀನ್, ವಿಡಿಯೋ, ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಇತ್ಯಾದಿ ಅಳವಡಿಸಿ ಈ ಬೋಗಿಗಳನ್ನು ಒಳ್ಳೆ ಸಭಾಂಗಣವಾಗಿಸಿದ್ದರು. ರೈಲಿನಲ್ಲಿ ಒಂದೂವರೆ ತಾಸು ಅನಂತರ ತಿರುವನಂತಪುತದ ಪೇಟ್ಟಾ ರೈಲು ಪ್ಲಾಟ್‍ಫಾರ್ಮಿನ ಮೇಲೆ ಒಂದು ತಾಸು - ಹೀಗೆ ಎರಡು ಸೆಶನ್ ತೆಗೆದುಕೊಂಡೆ.

ಅನ್ನಾ ಎಂಬ ವಿದೇಶೀ ಯುವತಿ ನಾನು ಪ್ರೆಸೆಂಟ್ ಮಾಡುತ್ತಿದ್ದಂತೆಯೇ ವಿಶುವಲ್ ಮಿನ್ಯೂಟಿಂಗ್ ಮಾಡಿದ್ದಳು. ನಿಜಕ್ಕೂ ತಲೆದೂಗಬೇಕು. ಮುಖ್ಯಾಂಶಗಳನ್ನು ಗ್ರಹಿಸಿ ಚಕಚಕನೆ ಸಣ್ಣಪುಟ್ಟ ಚಿತ್ರಗಳೊಂದಿಗೆ ಒಬ್ಬರ ಪ್ರೆಸೆಂಟೇಶನನ್ನು ಸಾದರಪಡಿಸುವುದು ದೊಡ್ಡ ಕೌಶಲವೇ ಸರಿ. ಭಲೇ ಅನ್ನಾ!

ಕೆಲವು ಬೋಗಿಗಳನ್ನು ಈ ಮುನ್ನೂರು ಪ್ಲಸ್ ಮಂದಿಗಾಗಿ ತಾತ್ಕಾಲಿಕ ಸ್ನಾನಗೃಹ ಮಾಡಿದ ಮುಹಮ್ಮದ್ ಅವರ ಜಾಣ್ಮೆ ಮೆಚ್ಚುವಂತಿತ್ತು. ಈ ಎಲ್ಲರೂ ದೇಶವಿದೇಶಗಳಲ್ಲಿ ಬೇರೆಬೇರೆ ವೃತ್ತಿಗಳಲ್ಲಿದ್ದು ಈ ಕೆಲಸವನ್ನು ಸ್ವಯಂಸೇವೆಯಾಗಿ ಮಾಡಿದ್ದರು.

ಎರಡೂ ಪ್ರೆಸೆಂಟೇಶನ್ ಬಳಿಕ ಪ್ರಶ್ನೆಗಳ ಸುರಿಮಳೆ. ಸಮಯದ ಮಿತಿಯಿತ್ತು. ಹೆಚ್ಚುಕಮ್ಮಿ ೪೦ ಪ್ರಶ್ನೆಗಳಿಗಾದರೂ ನಾನು ಉತ್ತರಿಸಿರಬೇಕು. ಅತ್ಯಂತ ಖುಷಿ ಕೊಟ್ಟ ಅಂಶ ಎಂದರೆ ಈ ಪೈಕಿ ಅಪ್ರಸ್ತುತ ಪ್ರಶ್ನೆ ಒಂದೂ ಇರಲಿಲ್ಲ! ಹತ್ತು ಸಾವಿರ ಅರ್ಜಿದಾರರ ನಡುವಿನಿಂದ ಈ ೩೦೦ ಎಳೆಯರನ್ನು ಆಯ್ದಿದ್ದರು.

ಆ ಎರಡು ದಿನಗಳು ಸಿಹಿ-ಕಹಿಗಳ ಮಿಶ್ರಣವಾಗಿತ್ತು. ನನ್ನನ್ನು ಹಿಂದೆ ತಿಳೀಸಿದಂತೆ ಈ ಚಾರ್ಟರ್ಡ್ ರೈಲು ಕಾಸರಗೋಡು ರೈಲು ನಿಲ್ದಾಣದಲ್ಲಿ ನಿಂತು ಮೇಲೇರಿಸಿಕೊಳ್ಳಬೇಕಿತ್ತು. ಅಲ್ಲಿ ಅವರಿಗೆ ಕೊನೆ ಗಳಿಗೆಯಲ್ಲಿ ಅನುಮತಿ ಸಿಗಲಿಲ್ಲವಂತೆ. ಪಯ್ಯನ್ನೂರಿಗೆ ಬನ್ನಿ ಎಂಬ ವಿನಂತಿ. ನಾನು ಟ್ಯಾಕ್ಸಿಯಲ್ಲಿ ಪಯ್ಯನ್ನೂರು ತಲಪುವ ಐದು ನಿಮಿಷ ಮೊದಲೇ ಈ ರೈಲು ಸೀದಾ ಹೋಗಿತ್ತು! ಅದೆಂತ ಆಘಾತ ಅಂತೀರಾ! ಕೊನೆಗೆ ರೈಲನ್ನು ಕಣ್ಣಪುರಂ ನಿಲ್ದಾಣದಲ್ಲಿ ನಿಲ್ಲಿಸಿ ಅಲ್ಲಿಗೆ ಬನ್ನಿ ಎಂಬ ವಿನಂತಿ. ಅದು ಮಧ್ಯರಾತ್ರಿಯ ಸಮಯ. ನನ್ನನ್ನು ಕರೆದೊಯ್ದ ನಮ್ಮೂರ ಟ್ಯಾಕ್ಸಿವಾಲಾ ತರುಣ ದಯಾನಂದರ ಉತ್ಸಾಹ ಅಲ್ಲದಿದ್ದರೆ ನಾನು ಬೇಸತ್ತು ಗುಡ್‍ಬೈ ಅಂದುಬಿಡುತ್ತಿದ್ದೆ. ಕೊನೆಗೂ ಮಾರ್ಗ ಹುಡುಕಿ ಕಣ್ಣಪುರಂ ಸೇರಿ ರೈಲು ಏರಿದಾಗ ಮಧ್ಯರಾತ್ರಿಯ ಒಂದೂವರೆ ಗಂಟೆ.

ಮರುದಿನ ಈ ಎಳೆಯರ ಉತ್ಸಾಹ, ಆಸಕ್ತಿ ಮತ್ತು ಶ್ರದ್ಧೆಯ ಹಿನ್ನೆಲೆಯಲ್ಲಿ ಟಾಟಾ ಜಾಗೃತಿ ಯಾತ್ರಾದ ಸಂಘಟಕರ ಬೇಜವಾಬ್ದಾರಿಯ ಪರಮಾವಧಿಯಿಂದಾದ ಕಹಿ ಮಾಸಿತ್ತು.

Thursday, January 29, 2009

ನೀರ ನಿಶ್ಚಿಂತೆಯ ಮೂಕ ಸಾಕ್ಷಿ



ಅದು ಆಂಧ್ರಪ್ರದೇಶ. ವಾರಂಗಲ್ ಜಿಲ್ಲೆಯ ಏನಬಾವಿ. ಸಂಪೂರ್ಣ ಸಾವಯವ ಗ್ರಾಮ. ಯಾರದೋ ಮನೆಯ ಜಗಲಿಯಲ್ಲಿ ಕುಳಿತಿದ್ದೆವು. ಎದುರು ಮನೆಯಲ್ಲಿನ ಅಕ್ಕಿ ಮುಡಿಯಂತಹ ಎರಡು ವಸ್ತುಗಳು ಗಮನ ಸೆಳೆದುವು.

ಹೋಗಿ ವಿಚಾರಿಸಿದರೆ ಅದು ಏತದ ಮೂಲಕ ನೀರೆತ್ತುವ ಉಪಕರಣ. ಕಬ್ಬಿಣದ ತಗಡಿನದು. ತುಕ್ಕು ಹಿಡಿದು ಜೀರ್ಣವಾಗುತ್ತಲಿತ್ತು. ಈ ಗ್ರಾಮದಲ್ಲಿ ನಾಲ್ಕು ದಶಕದ ಹಿಂದೆ ಇವು ಧಾರಾಳ ಬಳಕೆಯಲ್ಲಿದ್ದುವಂತೆ. ೨೫-೩೦ ವರ್ಷ ಹಿಂದೆ ಊರಿಗೆ ವಿದ್ಯುತ್ ಬರುವ ವರೆಗೂ ಇಲ್ಲಿನ ಹೊಲಗಳಿಗೆ ನೀರೆತ್ತಿ ಉಣಿಸಿದ್ದು ಇವುಗಳೇ. ಎತ್ತಿನ ಬಲದಿಂದ ಏತ ನಡೆಯುತ್ತಿತ್ತು.

ಕಾಲಚಕ್ರ ಉರುಳಿದೆ.ಏತ ಮರೆತುಹೋಗಿದೆ. ಆದರೆ ಈ ರೈತ, ಮಲ್ಲೇಶ ಈ ನೀರೆತ್ತುವ ಉಪಕರಣಕ್ಕೊಂದು ಹೊಸ ಕೆಲಸ ಕೊಟ್ಟ. ಕೋಳಿಗೂಡು.ಕೋಳಿಗಳಿಂದಾಗಿ ಇವು ಉಳಕೊಂಡುವು.

ವಿಷಚಕ್ರದಿಂದ ಬಿಡಿಸಿಕೊಂಡ ಏನಬಾವಿ ಈಗ ಮರಳಿ ಬಾಹ್ಯ ಒಳಸುರಿಗಳ ಅವಲಂಬನೆಯಿಲ್ಲದೆ ಕೃಷಿ ನಡೆಸಹತ್ತಿದೆ. ಕಳೆದೆರಡೂ ವರ್ಷಗಳಲ್ಲಿ ನೈಸರ್ಗಿಕ ಕೀಟನಾಶಕಗಳನ್ನೂ ಬಳಸಬೇಕಾಗಿ ಬಂದಿಲ್ಲ ಎನ್ನುತ್ತಾರೆ ಈ ರೈತರು. ಏನಬಾವಿಗೆ ಈಗ ’ಹಳೆಯ ಕಾಲದ ಒಳಿತುಗಳನ್ನು’ ನೆನಪಿಸಿಕೊಳ್ಳುವ ಕುತೂಹಲ.ಮಾನವಶಕ್ತಿಯಿಂದ ನೀರೆತ್ತುವ ತ್ರಾಸ ಅದೆಷ್ಟೇ ಇದ್ದರೂ ಆಗ ನೀರ ನಿಶ್ಚಿಂತೆಯೂ ಇತ್ತು ಎನ್ನುವುದನ್ನು ಈ ’ಕೋಳಿ ಗೂಡು’ ಕೆಲವು ಅಜ್ಜಂದಿರಿಗಾದರೂ ನೆನೆಪಿಸಿಕೊಟ್ಟೀತು.

ಮಲ್ಲೇಶರ ಈ ’ಕೋಳಿಗೂಡಿಗೆ’ ಪುರಾತನ ವಸ್ತುಗಳ ಸಂಗ್ರಹಾಲಯಕ್ಕೆ ಭಡ್ತಿ ಹೊಂದಲು ಬೇಕಾದ ಎಲ್ಲಾ ಗುಣಗಳೂ ಇವೆ!

Wednesday, January 28, 2009

ಜಲಸಾಕ್ಷರತೆಯಲ್ಲಿ ಮಂಗಳೂರು ಆಗ್ನೆಸ್ ಕಾಲೇಜಿನ ಮೇಲ್ಪಂಕ್ತಿ



ಮಂಗಳೂರಿನ ಸಂತ ಆಗ್ನೆಸ್ ಕಾಲೇಜು ನೀರಿನ ವಿಷಯದಲ್ಲಿ ತೆಗೆದುಕೊಳ್ಳುವ ಆಸಕ್ತಿ ನಿಜಕ್ಕೂ ಅನುಕರಣೀಯ. ವರ್ಷಗಳ ಹಿಂದೆ ಈ ಕಾಲೇಜು ವಾಮಂಜೂರಿನ ಬಳಿಯ ಕಿರಾಮ್ ಎಂಬ ಹಳ್ಳಿಯಲ್ಲಿ ಅಲ್ಲಿನವರನ್ನು ಪ್ರೇರೇಪಿಸಿ ಮಾಡಿದ ಜಲಾನಯನ ಅಭಿವೃದ್ಧಿಗೆ ಜಿಮ್ ಕಾರ್ಟರ್ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿತ್ತು.

ಕಾಲೇಜು ತನ್ನ ಎಲ್ಲಾ ಶೈಕ್ಷಣಿಕ ವಿಭಾಗಗಳ ಮೂಲಕ ನೀರಿನ ಒಂದಲ್ಲ ಒಂದು ಅಧ್ಯಯನ ಮಾಡಿಸಿದೆ.ಮಂಗಳೂರಿನ ವಿವಿಧ ಕಡೆಗಳ ಬಾವಿ ನೀರಿನ ಮಾದರಿಗಳನ್ನು ವಿಶ್ಲೇಷಿಸಿದೆ. ಇದರಲ್ಲಿ ಹೆಚ್ಚಿನವುಗಳಲ್ಲಿ ಈ-ಕೊಲಿ ಇರುವುದು ಪತ್ತೆಯಾಗಿದೆ. ಹಾಗೆಯೇ ಒಂದಷ್ಟು ಮನೆಗಳಲ್ಲಿ ನೀರಿನ ದೈನಂದಿನ ಬಳಕೆಯ ಬಗ್ಗೆ ಸಮೀಕ್ಷೆ.

ಗುಡ್ಡದ ನೆತ್ತಿಯ ಮೇಲೆ ಇರುವ ಆಗ್ನೆಸ್ ಕಾಲೇಜಿನಲ್ಲಿ ನೀರ ಸಮಸ್ಯೆಇದೆ. ಸುಮಾರು ಏಳೆಕ್ರೆಯಷ್ಟು ವಿಶಾಲವಾದ ಈ ಕ್ಯಾಂಪಸಿನಲ್ಲಿ ಏಳು ತೆರೆದ ಬಾವಿ, ಒಂದು ಕೊಳವೆಬಾವಿ ಇದೆ. ಹೆಚ್ಚು ಮಳೆನೀರು ಹೊರಹರಿದು ಹೋಗುವ ಜಾಗಗಳಲ್ಲಿ ಅದನ್ನು ಇಂಗಿಸುವ ಕೆಲಸವನ್ನೂ ಮಾಡಿದೆ. ಹಿಂದೆಯೂ ಇಂಥ ಕೆಲಸ ಸ್ವಲ್ಪ ಮಾಡಿತ್ತು. ಆದರೆ ಅದು ಬಾವಿಗಳನ್ನು ಲಕ್ಷ್ಯವಿಟ್ಟು ಮಾಡದ ಕಾರಣ ಅಷ್ಟು ಫಲ ಸಿಕ್ಕಿರಲಿಲ್ಲ. ಈ ಬಾರಿ ಇಲ್ಲಿನ ವಾಚನಾಲಯದ ಬಳಿಯ ಬಾವಿಯ ಹತ್ತಿರ ತುಂಬ ನೀರಿಂಗಿಸಿದ್ದಾರಂತೆ. ‘ಮುಂದಿನ ವರ್ಷ ಇದರ ರಿಸಲ್ಟ್ ಬರಬಹುದು’ಎಂಬ ನಿರೀಕ್ಷೆಯಲ್ಲಿದ್ದಾರೆ ಪ್ರಾಂಶುಪಾಲೆ ಸೋದರಿ ಪ್ರೇಮ್ ಡಿ ಸೋಜಾ.

ಕಾಲೇಜ್ ಡೇಗೆ ಸಂಬಂಧಿಸಿ ’ಜಲ್ ಜೀವನ್ ಹೈ’ ಎಂಬ ಅರ್ಥಗರ್ಭಿತ ಹಿಂದಿ ನಾಟಾಕವನ್ನು ಇಲ್ಲಿನ ವಿದ್ಯಾರ್ಥಿನಿಯರು ಪ್ರದರ್ಶಿಸಿದ್ದು ಇನ್ನೊಂದು ವಿಶೇಷ. ಕಾಲೇಜು ಹಿಂದಿ ನಾಟಕ ಅವತರಿಸಿದ್ದು ಇದೇ ಮೊದಲಂತೆ. ಹಿಂದಿ ಪ್ರಾಧ್ಯಾಪಕ ನಾಗೇಶ್ ಅವರ ಈ ನಿಜಕ್ಕೂ ಶ್ಲಾಘನೀಯ.

ಇನ್ನೂ ಒಂದು ವಿಶೇಷ ಎಂದರೆ ಇತರ ಹಲವು ವಿಭಾಗಗಳ ವಸ್ತುಸಂಗ್ರಹಾಲಯದ ಜತೆ ’ಜಲತರಂಗ’ ಎನ್ನುವ ವಾಟರ್ ಮ್ಯೂಸಿಯಮನ್ನೂ ಕಾಲೇಜು ತೆರೆದಿದೆ. ಇಲ್ಲಿ ಮಳೆಕೊಯ್ಲಿನ ಯಶೋಗಾಥೆಗಳ ಫೋಟೋ ಆಲ್ಬಂ, ಸೀಡಿ, ಮಾದರಿಗಳು ಇತ್ಯಾದಿ ಪ್ರದರ್ಶನಕ್ಕಿವೆ. ಮುಂದೆ ಈ ಮ್ಯೂಸಿಯಂ ಇನ್ನೂ ಸುಸಜ್ಜಿತವಾಗಲಿದೆ. ‘ಸಮಾಜಕ್ಕೆ ಈ ತಿಳಿವಳಿಕೆ ಕೊಡುವುದು ಹೇಗೆ ಎಂದು ಚಿಂತಿಸಿದಾಗ ಇದರ ಅಗತ್ಯ ಕಂಡುಬಂತು’ ಎನ್ನುತ್ತಾರೆ ಸೋದರಿ ಪ್ರೇಮ್.

ಸಂತ ಆಗ್ನೆಸ್ ಕಾಲೇಜ್ ಉಳಿದೆಲ್ಲಾ ಶಿಕ್ಷಣಗಳ ಜತೆ ಬದುಕಿಗೆ ಅತ್ಯಗತ್ಯವಾದ ಜಲ ಸಾಕ್ಷರತೆಯನ್ನೂ ಕಲಿಸುತ್ತಾ ಉಳಿದ ಕಾಲೇಜುಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ.

Saturday, January 17, 2009

ನಗೆ ಕೊಯ್ಲು



ಈ ಕೊಯ್ಲು ಮಾಡಿದವರು ಗೆ(ಳತಿ)ಳೆಯ ಹರಿಣಿ

Friday, January 16, 2009

ಕೊಕ್ಕರ್ಣಿ ಎಂಬ ಕೃಷಿ ಹೊಂಡ







ಕೊಕ್ಕರ್ಣೆ ಉಡುಪಿ ಜಿಲ್ಲೆಯ ಒಂದು ಊರು. ನನಗಿದು ಬಹುವಾಗಿ ನೆನಪಾದದ್ದು ಮೊನ್ನೆಮೊನ್ನೆ ಪಾಲಕ್ಕಾಡಿನ ಬಳಿಯ ಸಾವಯವಕ್ಕೆ ತಿರುಗುತ್ತಿರುವ ಹಳ್ಳಿ ಎರುಮೆಯೂರಿಗೆ ಹೋಗಿದ್ದಾಗ. ಇಲ್ಲಿನ ಮುಖ್ಯ ಬೆಳೆ ಭತ್ತ. ಇದು ಮಳೆಯಾಶ್ರಯದ ಬೆಳೆ. ಸುಮಾರು ನೂರೆಕರೆ. ೬೯ ರೈತಕುಟುಂಬ.

ಎರಡು ಗುಡ್ಡಗಳ ನಡುವಿನ ತಗ್ಗಿನ ಭಾಗದಲ್ಲಿ ಊರಿನ ಎಲ್ಲರ ಹೊಲಗಳೂ ಇವೆ. ಎರಡನೆ ಬೆಳೆಗೆ ನೀರಿನ ಕೊರತೆ. ಇಲ್ಲಿನ ವಾರ್ಷಿಕ ಮಳೆ ೧೨೦೦ ಮಿ.ಮೀ. ದೊಡ್ಡ ಸಮಸ್ಯೆಯೆಂದರೆ ಇಲ್ಲಿನ ಗುಡ್ಡಗಳಲ್ಲಿ ಬಂಡೆಗಳೇ ತುಂಬಿವೆ. ಮಣ್ಣು ಇರುವ ಜಾಗ ಅತ್ಯಲ್ಪ. ಹಾಗಾಗಿ ಗುಡ್ಡಗಳಲ್ಲಿ ಮಳೆಕೊಯ್ಲು ಮಾಡಿ ಅಥವಾ ತಲೆಕೊಳ ನಿರ್ಮಿಸಿ ಗದ್ದೆಗಳಲ್ಲಿ ಹೆಚ್ಚು ಕಾಲ ತೇವಾಂಶ ಇರುವಂತೆ ಮಾಡುವ ಅವಕಾಶ ಕಡಿಮೆ.

ಕೆಲವು ಹೊಲಗಳು ಇಷ್ಟರಲ್ಲಿಯೇ ಕರಟಿಬಿಟ್ಟಿದ್ದುವು. ನೋಡುತ್ತಾ ಹೋದಂತೆ ಅಲ್ಲಿಲ್ಲಿ ಕೆಲವು ಹೊಲದ ಅಂಚಿನಲ್ಲಿ ಪುಟ್ಟ ಹೊಂಡ, ನೀರು ಕಂಡಿತು. ಈ ಹೊಂಡಗಳಿಗೆ ಇಲ್ಲಿ ’ಕೊಕ್ಕರ್ಣಿ’ ಎಂದು ಹೆಸರು. ಇದು ಚಿಕ್ಕ ಕೆರೆ ಅಥವಾ ದೊಡ್ಡ ಹೊಂಡ. ಬೇಕಿದ್ದರೆ ಫಾರ್ಮ್ (ಕೃಷಿ ಹೊಂಡ) ಅಂತ ಕರೆಯಬಹುದು. ಪ್ರತಿ ರೈತರೂ ಇಂಥ ಕೊಕ್ಕರ್ಣಿ ರಚಿಸಿಕೊಂಡು ಮಳೆನೀರು ತುಂಬಿಟ್ಟರೆ ನೀರಸಮಸ್ಯೆ ಕುಗ್ಗಬಹುದು. ಗದ್ದೆಯ ಮೇಲ್ಭಾಗದಲ್ಲಿ ಇವನ್ನು ರಚಿಸಬೇಕು. ಆಗ ಈ ನೀರಾಶ್ರಯದಿಂದಾಗಿ ಕೆಳಭಾಗದಲ್ಲಿ ತೇವಾಂಶ ಹೆಚ್ಚು ಕಾಲ ಉಳಿಯುತ್ತದೆ. ಒಂದೋ ಎರಡೋ ರಕ್ಷಕ ನೀರಾವರಿ ( ಪ್ರೊಟೆಕ್ಟಿವ್ ಇರಿಗೇಶನ್) ಬೇಕಾದರೆ ಕೊಡಬಹುದು.

ಇಡೀ ಹಳ್ಳಿಯಲ್ಲಿ ಈಗ ಹತ್ತಿಪ್ಪತ್ತು ಕೊಕ್ಕರ್ಣಿ ಇರಬಹುದು. ಪ್ರತಿ ಕುಟುಂಬವೂ ಒಂದೊಂದು ಮಾಡಿಕೊಂಡರೆ ಎಲ್ಲ ಹೊಲಗಳಲ್ಲೂ ಹೆಚ್ಚು ಕಾಲ ನೀರ ಪಸೆ ಉಳಿದೀತು. ಇದಲ್ಲದೆ ಎರಡನೆ ಬೆಳೆಗೆ ಸ್ವಲ್ಪ ಹೃಸ್ವಾವಧಿಯ ಭತ್ತದ ತಳಿ ಬಳಸುವ, ಶ್ರೀ ಪದ್ಧತಿ ಅನುಸರಿಸುವ ಸಲಹೆಯನ್ನೂ ಕೊಟ್ಟೆವು.

ಕೊಡಗಿನ ಭತ್ತದ ಗದ್ದೆಗಳಿಗೆ ಬೆಂಬಲವಾಗಿ ಹಿಂದೆ ಇಂಥ ಕೆರೆಗಳು ಪಕ್ಕದ ಎತ್ತರದ ಗುಡ್ಡದಲ್ಲಿರುತ್ತಿದ್ದುವು. ಇವು ತಲೆಕೊಳಗಳು. ಅಥವಾ ಪರ್ಕೊಲೇಶನ್ ಪಾಂಡ್‍ಗಳು. ಇವುಗಳ ಕೊಡುಗೆಯನ್ನು ಅರ್ಥ ಮಾಡಿಕೊಳ್ಳದೆ ಹಲವು ರೈತರು ಅವನ್ನು ಮುಚ್ಚಿದ್ದಾರೆ.

ಇಲ್ಲಿ, ಎರುಮಯೂರಿನಲ್ಲಿ ಪಕ್ಕದ ಗುಡ್ಡವಿಡೀ ಕಲ್ಲಾದ ಕಾರಣ ಈ ಮಳೆನೀರಿನ ಹೊಂಡವನ್ನು ಗದ್ದೆಯಲ್ಲೇ ಮಾಡಿದ್ದಾರೆ. ಬಿಹಾರದ ಕೆಲವೆಡೆ ಈ ರೀತಿಯ ಕೊಕ್ಕರ್ಣಿಗಳನ್ನು ಅಲ್ಲಿನ ಪ್ರದಾನ್ ಎಂಬ ಸ್ವಯಂಸೇವಾ ಸಂಘಟನೆ ಪ್ರಚಾರ ಪಡಿಸಿದೆ. ಇದಕ್ಕೆ ೫% ಮಾಡೆಲ್ ಅಂತಲೇ ಹೆಸರು. ಒಂದೆಕರೆ ಗದ್ದೆಯಲ್ಲಿ ಐದು ಸೆಂಟ್ಸನ್ನು ಮಳೆನೀರು ಹಿಡಿದಿಡಲು ಬಳಸುವುದು ಇಲ್ಲಿನ ತತ್ವ.

ಈ ತತ್ವ ಕರ್ನಾಟಕದ ಗದ್ದೆಗಳಿಗೂ ನೀರನಿಶ್ಚಿಂತೆ ಕೊಡಬಲ್ಲುದು. ಹೊಲದಲ್ಲಿ ರಚಿಸುವುದಕ್ಕಿಂತಲೂ ಹೆಚ್ಚಾಗಿ ಪಕ್ಕದಲ್ಲೇ ಗುಡ್ಡವಿದ್ದು ಅವರವರ ಜಮೀನೂ ಇದ್ದರೆ ಅಲ್ಲಿ ’ಕೊಕ್ಕರ್ಣಿ’ ಮಾಡಿಕೊಂಡರೆ ನೀರಲಾಭ ಇನ್ನೂ ಹೆಚ್ಚು.

Thursday, January 15, 2009

ಪುಟ್ಟ ರೈತ ತಡೆಗಟ್ಟ




ಪಾಲಕ್ಕಾಡ್ ಜಿಲ್ಲೆಯ ಹಳ್ಳಿ ಎರುಮಯೂರಿನಲ್ಲಿ ಕಂಡ ಪುಟ್ಟ ರಚನೆಗಳಿವು. ಚಿಕ್ಕ ಕಣಿಗಳಲ್ಲಿ ನೀರನ್ನು ತಡೆದು ನಿಲ್ಲಿಸಲು ಈ ರೈತ ಬಳಸಿದ ಉಪಾಯ ನೋಡಿ.
ಸಾಮಾನ್ಯವಾಗಿ ಇಂಥ ಪುಟ್ಟ ತಡೆಗಟ್ಟಕ್ಕೆ ಅಡಿಕೆ ಮರದ ಸಲಿಕೆ ಅಥವಾ ಗಿಡಮರಗಳ ಗೆಲ್ಲು ಅಥವಾ ಬರೇ ಮಣ್ಣು ಬಳಸುವುದು ವಾಡಿಕೆ. ಆದರೆ ಇವರು ಮರಳ ಚೀಲಕ್ಕೆ ಮಣ್ಣು / ಮರಳು ತುಂಬಿ ಸುಲಭದಲ್ಲಿ ಈ ರಚನೆ ಮಾಡಿಕೊಂಡಿದ್ದಾರೆ.