Wednesday, February 4, 2009

’ಸುಲಭದ ಕಟ್ಟ’ದ ರೂವಾರಿಗಳಿಗೆ ಅಂಗೀಕಾರ











ನೀರಾವರಿಗೆ ನೀರಿಗಾಗಿ ರೈತರು ಹೊಳೆ-ತೋಡುಗಳಿಗೆ ಅಡ್ಡವಾಗಿ ಕಟ್ಟುವ ಒಡ್ಡಿಗೆ ಕಾಸರಗೋಡು-ದ.ಕ ಭಾಗದಲ್ಲಿ ಕಟ್ಟ ಎಂದು ಹೆಸರು. ಈ ರಚನೆ ತಾತ್ಕಾಲಿಕ. ಪ್ರತಿವರ್ಷ ಮತ್ತೆಮತ್ತೆ ಕಟ್ಟಬೇಕು.

ಸಾಂಪ್ರದಾಯಿಕ ಕಟ್ಟಕ್ಕೆ ಕಲ್ಲು-ಮಣ್ಣು, ಮರದ ಗೆಲ್ಲು, ಸೊಪ್ಪು ಇತ್ಯಾದಿ ಬಳಸುತ್ತಿದ್ದರು. ಮರಳಚೀಲ ಬಳಸಿ ಕಟ್ಟುವ ಕಟ್ಟ ಇದಕ್ಕಿಂತ ಶ್ರಮದ ದೃಷ್ಟಿಯಲ್ಲಿ ಹಗುರ. ಪ್ರತಿ ವರ್ಷ ದೊಡ್ಡ ಪ್ರಮಾಣದ ಮಣ್ಣು ತರುವುದು ಇನ್ನೊಂದು ತಲೆನೋವು. ವಾರಣಾಶಿಯ ಡಾ. ಕೃಷ್ಣಮೂರ್ತಿ ಮಣ್ಣಿಗೆ ಬದಲು ಸಿಲ್ಪಾಲಿನ್ ಹಾಳೆ ಬಳಸಿ ಈ ಕೆಲಸವನ್ನು ಇನ್ನಷ್ಟು ಹಗುರವಾಗಿಸಿದರು. ಈ ಮಾದರಿಗೆ ವಾರಣಾಶಿ ವಿಧಾನ ಎಂದೇ ಹೆಸರಿಟ್ಟರು.

ಚೀಲಕ್ಕೆ ಮರಳು ತುಂಬಲು, ಪೇರಿಸಿಡಲು ತುಂಬ ಕಾರ್ಮಿಕರು ಬೇಕು. ಇದಕ್ಕೆ ಬದಲು ಆಳದ ಮರಳಿನ ತಳ ಇರುವಲ್ಲಿ ಪೋಕ್‍ಲೈನ್ (ಜೇಸೀಬಿ) ಬಳಸಿ ಮರಳನ್ನು ಪೇರಿಸಿ ಅದರ ಒಳಮೈಗೆ ಅಗ್ಗದ ಪ್ಲಾಸ್ಟಿಕ್ ಹಾಳೆ ಹೊದೆಸಿದರೆ ಸಾಲದೇ? ದರ್ಬೆಯ ವಸಂತಕುಮಾರ್ ಈ ಪ್ರಯೋಗ ಮಾಡಿ ನೋಡಿದರು. ಸಕ್ಸೆಸ್! ಕಾರ್ಮಿಕರ ಕೊರತೆಯ ಈ ದಿನಗಳಲ್ಲಿ ಈ ಅನುಶೋಧನೆ ನಿಜಕ್ಕೂ ಮೆಚ್ಚಿಕೊಳ್ಳಬೇಕಾದದ್ದು.

ಬರೇ ಮರಳಿಗೆ ಪ್ಲಾಸ್ಟಿಕ್ ಬನಿಯನ್ ತೊಡಿಸಿದ ಈ ಹೊಸ ರೀತಿಯ ಕಟ್ಟ ಈ ವರೆಗೆ ಎಂಟು-ಹತ್ತು ರಚನೆ ಆಗಿದೆ. ‘ಬೇಕೆಂದರೆ ನೇತ್ರಾವತಿ ನದಿಗೂ ಇಂಥ ಅಗ್ಗದ ಕಟ್ಟ ಕಟ್ಟಿ ಮಂಗಳೂರಿಗೆ ನೀರು ಒಯ್ಯಬಹುದು; ಒಂದು ಸಿಮೆಂಟ್ ಅಣೆಕಟ್ಟು ಕಟ್ಟುವುದಕ್ಕೆ ಬದಲು ಇಂಥವು ಹತ್ತಿಪ್ಪತ್ತು - ನೂರಾರು ಕಟ್ಟಲು ಸಾಧ್ಯ’ ಎನ್ನುತ್ತಾರೆ ಡಾ.ವಾರಣಾಶಿ ಕೃಷ್ಣಮೂರ್ತಿ ಮತ್ತು ದರ್ಬೆ ವಸಂತಕುಮಾರ್.

ಈ ಇಬ್ಬರು ಗ್ರಾಮೀಣ ಅನುಶೋಧಕರಿಗೆ ಜನವರಿ ಐದರಂದು ಮಂಡ್ಯದ ಯುವದನಿ ಸೇವಾ ಪ್ರತಿಷ್ಠಾನ ಮತ್ತು ಮಂಡ್ಯ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಪ್ರಶಸ್ತಿ ಪ್ರದಾನ ಮಾಡಲಿವೆ.

(ಈ ಕಟ್ಟದ ಬಗ್ಗೆ ಹೆಚ್ಚಿನ ಮಾಹಿತಿಗೆ : ಕಟ್ಟಗಳು, ಅನುಶೋಧನೆಗಳು ಮತ್ತು ವಾರಣಾಶಿ ಮಾದರಿ - ಸಂ: ಶ್ರೀ ಪಡ್ರೆ; ಡಾ.ವಾರಣಾಶಿ ಕೃಷ್ಣಮೂರ್ತಿ. ಪ್ರತಿಗಳಿಗೆ : ವಾರಣಾಶಿ ಸಂಶೋಧನಾ ಪ್ರತಿಷ್ಠಾನ, ಅಂಚೆ: ಅಡ್ಯನಡ್ಕ , ೫೭೪ ೨೬೦ (ದ.ಕ.), ದೂರವಾಣಿ : ೦೮೨೫೫ - ೨೭೦ ೨೫೪, info@varanashi.com)

Monday, February 2, 2009

ರೈಲು ಹಳಿಗಳ ಮೇಲೆ ಜಾಗೃತಿ ಯಾತ್ರೆ







೨೦೦೮ ದಶಂಬರ ಕೊನೆಯ ವಾರ.ಸಂಪನ್ಮೂಲ ವ್ಯಕ್ತಿಯಾಗಿ ಬರಬೇಕು ಎಂಬ ಮಿಂಚಂಚೆ ಬರುವ ವರೆಗೆ ನನಗೆ ಈ ಟಾಟಾ ಜಾಗೃತಿ ಯಾತ್ರೆಯ ಬಗ್ಗೆ ಇನಿತೂ ಗೊತ್ತಿರಲಿಲ್ಲ. ದೇಶದಾದ್ಯಂತದ ೧೮ರಿಂದ ೨೫ರೊಳಗೆ ವಯಸ್ಸಿನ ವಿದ್ಯಾರ್ಥಿ - ವಿದ್ಯಾರ್ಥಿನಿಯರನ್ನು ಆಯ್ದು ರೈಲಿನಲ್ಲಿ ದೇಶ ಸುತ್ತಾಡಿಸಿ ಒಂದಷ್ಟು ಸಾಧಕರ ಭೇಟಿ, ಮಾತುಕತೆ ಮೂಲಕ ಕಲಿಕೆ. ಹದಿನೈದು ದಿನಗಳ ಗಾಲಿಯ ಮೇಲಿನ ದೇಶದರ್ಶನ.

ರೈಲು ಹೋಗುತ್ತಿದ್ದಂತೆಯೇ ಆಚೆ, ಈಚೆಯ ಎರಡು ಬೋಗಿಗಳ ಜನರಿಗೆ ಮಳೆಕೊಯ್ಲಿನ ಬಗ್ಗೆ ಸ್ಲೈಡ್ ಶೋ. ಪ್ಲಾಸ್ಮಾ ಸ್ಕ್ರೀನ್, ವಿಡಿಯೋ, ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಇತ್ಯಾದಿ ಅಳವಡಿಸಿ ಈ ಬೋಗಿಗಳನ್ನು ಒಳ್ಳೆ ಸಭಾಂಗಣವಾಗಿಸಿದ್ದರು. ರೈಲಿನಲ್ಲಿ ಒಂದೂವರೆ ತಾಸು ಅನಂತರ ತಿರುವನಂತಪುತದ ಪೇಟ್ಟಾ ರೈಲು ಪ್ಲಾಟ್‍ಫಾರ್ಮಿನ ಮೇಲೆ ಒಂದು ತಾಸು - ಹೀಗೆ ಎರಡು ಸೆಶನ್ ತೆಗೆದುಕೊಂಡೆ.

ಅನ್ನಾ ಎಂಬ ವಿದೇಶೀ ಯುವತಿ ನಾನು ಪ್ರೆಸೆಂಟ್ ಮಾಡುತ್ತಿದ್ದಂತೆಯೇ ವಿಶುವಲ್ ಮಿನ್ಯೂಟಿಂಗ್ ಮಾಡಿದ್ದಳು. ನಿಜಕ್ಕೂ ತಲೆದೂಗಬೇಕು. ಮುಖ್ಯಾಂಶಗಳನ್ನು ಗ್ರಹಿಸಿ ಚಕಚಕನೆ ಸಣ್ಣಪುಟ್ಟ ಚಿತ್ರಗಳೊಂದಿಗೆ ಒಬ್ಬರ ಪ್ರೆಸೆಂಟೇಶನನ್ನು ಸಾದರಪಡಿಸುವುದು ದೊಡ್ಡ ಕೌಶಲವೇ ಸರಿ. ಭಲೇ ಅನ್ನಾ!

ಕೆಲವು ಬೋಗಿಗಳನ್ನು ಈ ಮುನ್ನೂರು ಪ್ಲಸ್ ಮಂದಿಗಾಗಿ ತಾತ್ಕಾಲಿಕ ಸ್ನಾನಗೃಹ ಮಾಡಿದ ಮುಹಮ್ಮದ್ ಅವರ ಜಾಣ್ಮೆ ಮೆಚ್ಚುವಂತಿತ್ತು. ಈ ಎಲ್ಲರೂ ದೇಶವಿದೇಶಗಳಲ್ಲಿ ಬೇರೆಬೇರೆ ವೃತ್ತಿಗಳಲ್ಲಿದ್ದು ಈ ಕೆಲಸವನ್ನು ಸ್ವಯಂಸೇವೆಯಾಗಿ ಮಾಡಿದ್ದರು.

ಎರಡೂ ಪ್ರೆಸೆಂಟೇಶನ್ ಬಳಿಕ ಪ್ರಶ್ನೆಗಳ ಸುರಿಮಳೆ. ಸಮಯದ ಮಿತಿಯಿತ್ತು. ಹೆಚ್ಚುಕಮ್ಮಿ ೪೦ ಪ್ರಶ್ನೆಗಳಿಗಾದರೂ ನಾನು ಉತ್ತರಿಸಿರಬೇಕು. ಅತ್ಯಂತ ಖುಷಿ ಕೊಟ್ಟ ಅಂಶ ಎಂದರೆ ಈ ಪೈಕಿ ಅಪ್ರಸ್ತುತ ಪ್ರಶ್ನೆ ಒಂದೂ ಇರಲಿಲ್ಲ! ಹತ್ತು ಸಾವಿರ ಅರ್ಜಿದಾರರ ನಡುವಿನಿಂದ ಈ ೩೦೦ ಎಳೆಯರನ್ನು ಆಯ್ದಿದ್ದರು.

ಆ ಎರಡು ದಿನಗಳು ಸಿಹಿ-ಕಹಿಗಳ ಮಿಶ್ರಣವಾಗಿತ್ತು. ನನ್ನನ್ನು ಹಿಂದೆ ತಿಳೀಸಿದಂತೆ ಈ ಚಾರ್ಟರ್ಡ್ ರೈಲು ಕಾಸರಗೋಡು ರೈಲು ನಿಲ್ದಾಣದಲ್ಲಿ ನಿಂತು ಮೇಲೇರಿಸಿಕೊಳ್ಳಬೇಕಿತ್ತು. ಅಲ್ಲಿ ಅವರಿಗೆ ಕೊನೆ ಗಳಿಗೆಯಲ್ಲಿ ಅನುಮತಿ ಸಿಗಲಿಲ್ಲವಂತೆ. ಪಯ್ಯನ್ನೂರಿಗೆ ಬನ್ನಿ ಎಂಬ ವಿನಂತಿ. ನಾನು ಟ್ಯಾಕ್ಸಿಯಲ್ಲಿ ಪಯ್ಯನ್ನೂರು ತಲಪುವ ಐದು ನಿಮಿಷ ಮೊದಲೇ ಈ ರೈಲು ಸೀದಾ ಹೋಗಿತ್ತು! ಅದೆಂತ ಆಘಾತ ಅಂತೀರಾ! ಕೊನೆಗೆ ರೈಲನ್ನು ಕಣ್ಣಪುರಂ ನಿಲ್ದಾಣದಲ್ಲಿ ನಿಲ್ಲಿಸಿ ಅಲ್ಲಿಗೆ ಬನ್ನಿ ಎಂಬ ವಿನಂತಿ. ಅದು ಮಧ್ಯರಾತ್ರಿಯ ಸಮಯ. ನನ್ನನ್ನು ಕರೆದೊಯ್ದ ನಮ್ಮೂರ ಟ್ಯಾಕ್ಸಿವಾಲಾ ತರುಣ ದಯಾನಂದರ ಉತ್ಸಾಹ ಅಲ್ಲದಿದ್ದರೆ ನಾನು ಬೇಸತ್ತು ಗುಡ್‍ಬೈ ಅಂದುಬಿಡುತ್ತಿದ್ದೆ. ಕೊನೆಗೂ ಮಾರ್ಗ ಹುಡುಕಿ ಕಣ್ಣಪುರಂ ಸೇರಿ ರೈಲು ಏರಿದಾಗ ಮಧ್ಯರಾತ್ರಿಯ ಒಂದೂವರೆ ಗಂಟೆ.

ಮರುದಿನ ಈ ಎಳೆಯರ ಉತ್ಸಾಹ, ಆಸಕ್ತಿ ಮತ್ತು ಶ್ರದ್ಧೆಯ ಹಿನ್ನೆಲೆಯಲ್ಲಿ ಟಾಟಾ ಜಾಗೃತಿ ಯಾತ್ರಾದ ಸಂಘಟಕರ ಬೇಜವಾಬ್ದಾರಿಯ ಪರಮಾವಧಿಯಿಂದಾದ ಕಹಿ ಮಾಸಿತ್ತು.